ಮೋಲ್ಸ್‍ವರ್ತ್, ಮೇರಿ ಲೂಯೀಸಾ
1839 - 1921. ಶಿಶು ಸಾಹಿತ್ಯದ ಜೇನ್ ಆಸ್ಟಿನ್ ಎಂದೇ ಖ್ಯಾತಳಾದ ಬ್ರಿಟಿಷ್ ಲೇಖಕಿ. ನೇಥ್‍ನ ರಾಟರ್‍ಡಾಮ್ ಎಂಬಲ್ಲಿ 29 ಮೇ 1839ರಂದು ಸ್ಕಟ್ ಮನೆತನದಲ್ಲಿ ಜನಿಸಿದಳು. ತಂದೆ, ಚಾಲ್ರ್ಸ್ ಅಗಸ್ಟಸ್ ಸ್ಟಿವಾರ್ಟ್ ಒಬ್ಬ ಪ್ರಸಿದ್ಧ ವ್ಯಾಪಾರಿ. ಈಕೆಯ ಸಂಪೂರ್ಣ ವಿದ್ಯಾಭ್ಯಾಸ ಸ್ವಿಟ್ಸರ್ಲೆಂಡ್‍ನಲ್ಲಿ ನಡೆಯಿತಾದರೂ ತನ್ನ ಬಹುಪಾಲು ಬಾಲ್ಯದ ದಿನಗಳನ್ನು ಮ್ಯಾಂಚೆಸ್ಟರ್‍ನಲ್ಲಿ ಕಳೆದಳು. ಕೆಲ ವರ್ಷಗಳನ್ನು ಫ್ರಾನ್ಸ್ ಮತ್ತು ಜರ್ಮನಿಯಲ್ಲೂ ಕಳೆದಳು. ಸ್ಟಿವಾರ್ಟ್ ಎಂಬುದು ಈಕೆಯ ಮದುವೆಯ ಮುಂಚಿನ ಹೆಸರು. 1861ರಲ್ಲಿ ಮೇಜರ್ ರಿಚರ್ಡ್ ಮೋಲ್ಸ್‍ವರ್ತ್ ಎಂಬಾತನನ್ನು ವಿವಾಹವಾಗಿ 1883ರಲ್ಲಿ ಲಂಡನ್‍ನಲ್ಲಿ ನೆಲಸಿದಳು. ತನ್ನ ಬದುಕಿನ ಕಡೆಗಾಲವನ್ನು ಇಲ್ಲಿಯೇ ಕಳೆದು 1921 ಜುಲೈ 20 ರಂದು ನಿಧನ ಹೊಂದಿದಳು.

	ಈಕೆಯ ಸಾಹಿತ್ಯ ಕೃಷಿ ಆರಂಭವಾದದ್ದು 1869ರಲ್ಲಿ. ಎನ್ನಿಸ್ ಗ್ರಾಹಾಂ ಎಂಬ ಗುಪ್ತನಾಮದಲ್ಲಿ ಪ್ರೌಢರಿಗಾಗಿ ಬರೆದ ಕಾದಂಬರಿಗಳೇ ಈಕೆಯ ಆರಂಭದ ಕೃತಿಗಳು. ಲವರ್ ಅಂಡ್ ಹಸ್ಬೆಂಡ್ ಈಕೆಯ ಮೊದಲ ಕೃತಿ. ಎಂಟು ಕಾದಂಬರಿಗಳನ್ನು ಬರೆದಿದ್ದಾಳೆ. ಆದರೆ ಇವಳಿಗೆ ಸಾಹಿತ್ಯ ಲೋಕದಲ್ಲಿ ಭದ್ರವಾದ ಸ್ಥಾನ ದೊರಕಿದ್ದು ಶಿಶು ಸಾಹಿತ್ಯದಿಂದ.

	ಈಕೆ ಮಕ್ಕಳಿಗಾಗಿ ಬರೆದ ಕಥೆಗಳನ್ನು ಅದ್ಭುತ ಕಥೆಗಳು ನಿಜಜೀವನದ ಘಟನೆಗಳನ್ನು ಆಧರಿಸಿ ಬರೆದ ಮಕ್ಕಳ ಕತೆಗಳು ಎಂಬ ಎರಡುವರ್ಗಗಳನ್ನಾಗಿ ಮಾಡಬಹುದು. ದಿ ಕಕೂ ಕ್ಲಾಕ್ (1877) , ದಿ ಟೇಪ್‍ಸ್ಟ್ರಿ ರೂಮ್(1879), ಫೋರ್ ವಿಂಡ್ಸ್ ಫಾರಮ್ (1887), ಫೇರೀಸ್ ಅಫೀಲ್ಡ್ (1911) - ಇವು ಅದ್ಭುತ ಕಥೆಗಳು. ದಿ ಅಡ್ವೆಂಚರ್ಸ್ ಆಫ್ ಹೇರ್ ಬೇಬಿ (1881), ಟೂ ಲಿಟ್ಲ್ ವೇಫ್ಸ್ (1883), ಅಸ್ (1885), ಸಿಲ್ವರ್ ಥಾನ್ರ್ಸ್ (1887), ದಿ ಓಲ್ಡ್ ಪಿನ್‍ಕುಶನ್ (1889), ದಿ ರೆಡ್ ಗ್ರೇಂಜ್ (1891), ದಿ ಕಾರ್‍ವ್ಡ್ ಲಯನ್ಸ್ (1895) - ಇವು ಮುಖ್ಯವಾದ ಮಕ್ಕಳ ಕಥೆಗಳು. ದಿ ಚಿಲ್ಡ್ರನ್ ಆಫ್ ದಿ ಕ್ಯಸಲ್ (1890), ನರ್ಸ್ ಹೆದರ್ ಡೇಲ್ಸ್ ಸ್ಟೋರಿ (1891), ದೀ ಹೌಸ್ ದಟ್ ಗ್ರ್ಯೂ (1900), ಪೀಟರ್ ಕಿನ್ (1902) ಎಂಬ ಇತರ ಕೃತಿಗಳನ್ನೂ ಹೆಸರಿಸಬಹುದು. ಈಕೆಯ ಕಥನ ಕೌಶಲ ಹಾಗೂ ಮಕ್ಕಳ ಮನೋವಿಶ್ಲೇಷಣಾ ಸಾಮಥ್ರ್ಯಕ್ಕೆ ದಿ ಸ್ಟೋರಿ ಆಫ್ ಎ ಇಯರ್ (1910) ಮತ್ತು ಫೇರೀಸ್ ಅಫೀಲ್ಡ್ (1911) - ಇವು ಅತ್ಯುತ್ತಮ ಉದಾಹರಣೆಗಳು.
 (ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ